ಜಾರ್ಜ್‍ಟೌನ್ -

1 ಗೈಯಾನ ಗಣರಾಜ್ಯದ ರಾಜಧಾನಿ ; ಪ್ರಮುಖ ಬಂದರು. ಜನಸಂಖ್ಯೆ ಸು.1,95,000 (1970ರ ಅಂದಾಜು). ಡೆಮರ್ಯಾರ ನದಿಯ ಮುಖದ ಬಳಿ, ಅದರ ಬಲದಂಡೆಯ ಮೇಲೆ ಇದೆ. ಡಚ್ಚರ ಸ್ವಾಧೀನದಲ್ಲಿದ್ದಾಗ ಇದಕ್ಕೆ ಮೊದಲಿದ್ದ ಹೆಸರು ಸ್ಟ್ಯಾಬ್ರೋಕ್. 1784ರಲ್ಲಿ ಇದನ್ನು ಎಸಕೀಬೋ ಮತ್ತು ಡೆಮರ್ಯಾರ ವಸಾಹತು ಪ್ರದೇಶಗಳ ಸಂಯುಕ್ತ ರಾಜಧಾನಿಯಾಗಿ ಮಾಡಿ 1812ರಲ್ಲಿ ಇದರ ಹೆಸರನ್ನು ಜಾರ್ಜ್‍ಟೌನ್ ಎಂದು ಬದಲಾಯಿಸಲಾಯಿತು.

ಜಾರ್ಜ್‍ಟೌನ್ ಜಗತ್ತಿನ ಅತ್ಯಂತ ಸುಂದರ ನಗರಗಳಲ್ಲೊಂದು ಎಂದು ಪ್ರಸಿದ್ಧವಾಗಿದೆ. ನಗರದ ರಸ್ತೆಗಳು ಅಗಲವಾಗಿಯೂ ಅನೇಕ ಕಡೆ ಜೋಡಿಯಾಗಿಯೂ ಇವೆ. ಮೇನ್ ಸ್ಟ್ರೀಟ್ ಎಂಬುದು ನಗರದ ಪ್ರಮುಖ ಮತ್ತು ಅತ್ಯಂತ ಸುಂದರ ರಸ್ತೆ. ನಗರದ ವಿವಿಧ ಭಾಗಗಳಲ್ಲಿ ಹಂಚಿಹೋಗಿರುವ ಪ್ರಮುಖ ಕಟ್ಟಡಗಳ ಸುತ್ತಲೂ ಸುಂದರ ಉದ್ಯಾನಗಳಿವೆ. ನಗರದ ಮಧ್ಯದಲ್ಲಿರುವ ಶಾಸನ ಭವನ, ಪುರಸಭಾ ಭವನ, ನ್ಯಾಯಾಲಯ ಕಟ್ಟಡಗಳು ಹಳೆಯವು. 19ನೆಯ ಶತಮಾನದ ಕೊನೆಯ ಭಾಗದಲ್ಲಿ ಕಟ್ಟಿದವು. ಇಲ್ಲಿ ಎರಡು ಆಸ್ಪತ್ರೆಗಳು, ಸಾರ್ವಜನಿಕ ಗ್ರಂಥಾಲಯ ಇವೆ. ಹುಡುಗರಿಗಾಗಿ ಕ್ವೀನ್ಸ್ ಕಾಲೇಜು, ಹುಡುಗಿಯರಿಗಾಗಿ ಬಿಷಪ್ಸ್ ಹೈಸ್ಕೂಲು ಮತ್ತು ಒಂದು ತಾಂತ್ರಿಕ ಶಿಕ್ಷಣ ಸಂಸ್ಥೇ ಇವೆ. ಗಣರಾಜ್ಯದ ಏಕೈಕ ವಿಶ್ವವಿದ್ಯಾಲಯವಾದ ಗೈಯಾನ ವಿಶ್ವವಿದ್ಯಾಲಯ ಇರುವುದು ಇಲ್ಲಿಯೆ. ನಗರದ ಹೊರವಲಯದಲ್ಲಿರುವ ಸಸ್ಯೋದ್ಯಾನ ಪ್ರಸಿದ್ಧವಾದ್ದು. ಇಲ್ಲಿ ಬತ್ತ, ಕಬ್ಬು ಮತ್ತು ಹತ್ತಿಯ ಪ್ರಾಯೋಗಿಕ ಕ್ಷೇತ್ರಗಳಿವೆ. ಇಲ್ಲಿಯ ಸಮುದ್ರ ಕಟ್ಟೆ ಹಾಗೂ ನಗರ ಮಧ್ಯದಲ್ಲಿರುವ ಉದ್ಯಾನ ಪ್ರಮುಖ ವಿಹಾರಕೇಂದ್ರಗಳು. ಕ್ರಿಕೆಟ್, ಫುಟ್ಬಾಲ್, ಕುದುರೆಸವಾರಿ, ದೋಣಿಪಂದ್ಯ ಇಲ್ಲಿಯ ಮುಖ್ಯ ಕ್ರೀಡೆಗಳು. ಇಲ್ಲಿಯ ಬಂದರಿನ ಮೂಲಕ ಸಕ್ಕರೆ, ಬತ್ತ, ಹಣ್ಣು, ಚಿನ್ನ, ವಜ್ರ, ಬಾಕ್ಸೈಟ್ ಹೆಚ್ಚಾಗಿ ರಫ್ತಾಗುತ್ತವೆ.

2 ಅಮೆರಿಕ ಸಂಯುಕ್ತ ಸಂಸ್ಥಾನಗಳ ಕೊಲಂಬಿಯ ಡಿಸ್ಟ್ರಿಕ್ಟಿನಲ್ಲಿ ಮೊದಲು ಇದ್ದ ನಗರ. 1665ರಲ್ಲಿ ಸ್ಥಾಪಿತವಾದ ಈ ನಗರವನ್ನು 1878ರಲ್ಲಿ ವಾಷಿಂಗ್‍ಟನ್ನಿನಲ್ಲಿ ವಿಲೀನಗೊಳಿಸಲಾಯಿತು. 1989ರಲ್ಲಿ ಸ್ಥಾಪಿತವಾದ 112 ಎಕರೆ ಪ್ರದೇಶವನ್ನಾವರಿಸಿದ ಪ್ರಸಿದ್ಧ ಜಾರ್ಜ್‍ಟೌನ್ ವಿಶ್ವವಿದ್ಯಾಲಯ ಇರುವುದು ಇಲ್ಲಿಯೆ.

3 ಈ ಹೆಸರಿನ ನಗರಗಳು ಇನ್ನೂ ಅನೇಕ ಕಡೆ ಇವೆ. ಅಮೆರಿಕದ ಕಾಲರಾಡೊ, ಇಲಿನಾಯ್, ಕೆಂಟುಕಿ, ಮ್ಯಾಸಚೂಸೆಟ್ಸ್ ರಾಜ್ಯಗಳಲ್ಲಿ ಮತ್ತು ಕೆನಡ, ವೆಸ್ಟ್‍ಇಂಡೀಸ್, ಮಲಯ-ಈ ದೇಶಗಳಲ್ಲಿರುವ ನಗರಗಳು ಪ್ರಸಿದ್ಧ.
(ಎಚ್.ಜಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ